ಶೇಷಗಿರಿರಾವ್, ಎಲ್ ಎಸ್
	1925-. ಕನ್ನಡದಲ್ಲೂ ಇಂಗ್ಲಿಷ್‍ನಲ್ಲೂ ಕೃತಿರಚನೆ ಮಾಡಿದ ಪ್ರಸಿದ್ಧ ಲೇಖಕರು, ವಿಮರ್ಶಕರು. ಲಕ್ಷ್ಮೇಶ್ವರ ಸ್ವಾಮಿರಾಯ ಶೇಷಗಿರಿರಾವ್ ಇವರ ಪೂರ್ಣ ಹೆಸರು. ಇವರು 1925 ಫೆಬ್ರವರಿ 16ರಂದು ಬೆಂಗಳೂರಿನಲ್ಲಿ ಜನಿಸಿದರು. ಬೆಂಗಳೂರು ಮೈಸೂರುಗಳಲ್ಲಿ ಅಧ್ಯಯನ ಮಾಡಿದರು. ಇಂಗ್ಲಿಷ್ ಸಾಹಿತ್ಯದ ಬಿ.ಎ. ಆನರ್ಸ್‍ನಲ್ಲಿ ಚಿನ್ನದ ಪದಕ ಪಡೆದರು. ನಾಗಪುರ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. ಮುಗಿಸಿ ಕೋಲಾರ, ಮಡಿಕೇರಿ, ಬೆಂಗಳೂರುಗಳಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ, ಕೊನೆಯ ಕೆಲವು ವರ್ಷ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದರು. ಇಂಗ್ಲಿಷ್ ಸಾಹಿತ್ಯವನ್ನು ಕನ್ನಡಿಗರಿಗೂ ಕನ್ನಡ ಸಾಹಿತ್ಯವನ್ನು ಇಂಗ್ಲಿಷ್ ಬಲ್ಲವರಿಗೂ ಪರಿಚಯ ಮಾಡಿಕೊಡುವ ಕಾರ್ಯವನ್ನು ಕಳೆದ 45 ವರ್ಷಗಳಿಂದಲೂ ಮಾಡುತ್ತ ಬಂದಿದ್ದಾರೆ. 

	ಹಿಸ್ಟರಿ ಆಫ್ ಕನ್ನಡ ಲಿಟರೇಚರ್, ಎನ್ ಇಂಟ್ರಡ ಕ್ಶನ್ ಟು ಮಾಡರ್ನ್ ಕನ್ನಡ ಲಿಟರೇಚರ್, ಮಾಸ್ತಿ ವೆಂಕಟೇಶ ಐಯ್ಯಂಗಾರ್, ಟಿ.ಪಿ. ಕೈಲಾಸಂ ಎಂಬ ಕೃತಿಗಳನ್ನು ರಚಿಸಿದ್ದಾರೆ. ಸಿಕ್ಸ್ಟೀ ಇಯರ್ಸ್ ಆಫ್ ಕನ್ನಡ ಪೊಯಟ್ರಿ, ಸಿಕ್ಸ್ಟೀ ಇಯರ್ಸ್ ಆಫ್ ಕನ್ನಡ ಪ್ರೋಸ್, ಸಿಕ್ಸ್ಟೀ ಇಯರ್ಸ್ ಆಫ್ ಕನ್ನಡ ಸ್ಟೋರಿ ಎಂಬ ಮೂರು ಪುಸ್ತಕಗಳನ್ನು ಸಂಪಾದಿಸಿದ್ದಾರೆ. ಥಿಯೇಟರ್ ಮೂವ್‍ಮೆಂಟ್ ಇನ್ ಕರ್ನಾಟಕ, ದಿ ಪ್ರೆಸಿಡೆಂಟ್ಸ್ ಇವರ ಇತರ ಇಂಗ್ಲಿಷ್ ಕೃತಿಗಳು. 

	ಇವರು ಕನ್ನಡದಲ್ಲೂ ವಿಪುಲವಾಗಿ ಬರೆದಿದ್ದಾರೆ. ಇದು ಜೀವನ (1948), ಕಾದಂಬರಿ ಮತ್ತು ಸಾಮಾನ್ಯ ಮನುಷ್ಯ, ಹೊಸಗನ್ನಡ ಸಾಹಿತ್ಯ, ಇಂಗ್ಲಿಷ್ ಭಾಷೆಯಲ್ಲಿ ಆಧುನಿಕ ಸಾಹಿತ್ಯ ವಿಮರ್ಶೆ, ಜಗದ ಜಾತ್ರೆಯಲ್ಲಿ ಗ್ರೀಕ್ ರಂಗಭೂಮಿ ಮತ್ತು ನಾಟಕ, ಆಚಾರ್ಯ ಬಿ.ಎಂ.ಶ್ರೀ, ಟಿ.ಪಿ.ಕೈಲಾಸಂ, ವಿಲಿಯಂ ಷೇಕ್‍ಸ್ಪಿಯರ್, ಪಾಶ್ಚಾತ್ಯ ಮತ್ತು ಭಾರತೀಯ ಮಹಾಕಾವ್ಯಗಳ ಮನೋಧರ್ಮ, ಫ್ರಾನ್ಜ್ ಕಾಫ್ಕ, ಪಾಶ್ಚಾತ್ಯ ಸಾಹಿತ್ಯ ವಿಹಾರ, ಮಾಸ್ತಿ ವೆಂಕಟೇಶ ಐಯ್ಯಂಗಾರ್, ಪ್ರಿಯ ಕನ್ನಡ ಬಂಧು, ಕನ್ನಡ ಅಳಿವು ಉಳಿವು, ಭಾರತೀಯ ಸಾಹಿತ್ಯ ಸಮೀಕ್ಷೆ, ಸಾಹಿತ್ಯ ಬದುಕು, ಸಾಹಿತ್ಯ ವಿಶ್ಲೇಷಣೆ, ಸಿರಿಸಂಪದ, ಆಕಾಂಕ್ಷೆ ಮತ್ತು ಆಸ್ತಿ (ಎರಡು ನಾಟಕಗಳು), ನಾಲ್ಕು ಕಥಾಸಂಕಲನಗಳು, ಬೆಳಕಿನ ದೂತರು, ಎಂ. ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್, ಇಲಿಯಡ್, ಎರಡು ನಗರಗಳ ಕಥೆ, ಕನ್ನಡ ಸಣ್ಣಕಥೆಗಳು ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. 

	ಇದಲ್ಲದೆ ಭಾರತದ ಸಾಂಸ್ಕøತಿಕ ಪರಂಪರೆಯನ್ನು ಎಳೆಯರಿಗೆ ಪರಿಚಯ ಮಾಡಿಕೊಡುವ 510 ಹಿರಿಯ ಚೇತನಗಳ ಪರಿಚಯ ಮಾಡಿಕೊಡುವ ಭಾರತ-ಭಾರತಿ ಪುಸ್ತಕ ಸಂಪದದ ಪ್ರಧಾನ ಸಂಪಾದಕರಾಗಿದ್ದರು. ಬೆಂಗಳೂರು ವಿಶ್ವವಿದ್ಯಾಲಯ ಪ್ರಕಟಿಸಿದ ಸಾಹಿತ್ಯ ಚರಿತ್ರೆಯ ಸಂಪುಟಗಳಿಗೆ ಇವರು ಸಂಪಾದಕರಾಗಿದ್ದರು. 

	ಇಂಡಿಯನ್ ಎಕ್ಸ್‍ಪ್ರೆಸ್ ಪತ್ರಿಕೆಯಲ್ಲಿ (1975-76) ಗೋಪಾಲಕೃಷ್ಣ ಅಡಿಗರಿಂದ ಆರಂಭಿಸಿ 35ಮಂದಿ ಕನ್ನಡದ ಹಿರಿಯ ಲೇಖಕರ ಪರಿಚಯವನ್ನು ಇಂಗ್ಲಿಷ್ ಓದುಗರಿಗೆ ಮಾಡಿಕೊಟ್ಟಿದ್ದಾರೆ. ಅಲ್ಲದೆ ದಿ ಹಿಂದೂ, ಡೆಕ್ಕನ್ ಹೆರಾಲ್ಡ್, ದಿ ಟೈಮ್ಸ್ ಆಫ್ ಇಂಡಿಯ, ಆನಂದ ಬಜಾರ ಪತ್ರಿಕೆ, ದಿ ವೀಕ್ ಮೊದಲಾದ ಇಂಗ್ಲಿಷ್ ಪತ್ರಿಕೆಗಳ ಮುಖಾಂತರ ಕನ್ನಡ ಸಾಹಿತ್ಯ-ಸಾಹಿತಿಗಳ ಕುರಿತು ಪರಿಚಯ ಮಾಡಿಕೊಟ್ಟಿದ್ದಾರೆ. 

	ಕೇರಳ ಸಾಹಿತ್ಯ ಅಕಾಡೆಮಿ ತನ್ನ ರಜತೋತ್ಸವದ ಸಂದರ್ಭದಲ್ಲಿ ಕಂಪ್ಯಾರಿಟಿವ್ ಇಂಡಿಯನ್ ಲಿಟರೇಚರ್ ಯೋಜನೆ ಕೈಗೆತ್ತಿಕೊಂಡಾಗ ಎರಡು ಬೃಹತ್ ಸಂಪುಟಗಳ ಕನ್ನಡ ಅನುವಾದದ ಸಂಪಾದಕರಾಗಿ ಕಾರ್ಯ ನಿರ್ವಹಿಸಿದರು. ಕೇರಳದ ಇಂಡಿಯನ್ ರೈಟರ್ಸ್ ಯೂನಿಯನ್ ದಿ ಇಂಡಿಯನ್ ರೈಟರ್ಸ್ ಕಾಂಟ್ರಿಬ್ಯೂಶನ್ ಟು ದಿ ಫ್ರೀಡಂ ಸ್ಟ್ರಗಲ್ ಎಂಬ ಪ್ರಕಟಣೆ ಯೋಜನೆಯಲ್ಲಿ ಇವರು ಸಂಪಾದಕ ಮಂಡಲಿಯ ಸದಸ್ಯರಾಗಿದ್ದರು. 

	ಇವರ ಇಂಗ್ಲಿಷ್ ಸಾಹಿತ್ಯ ಚರಿತ್ರೆ (1996) ಕನ್ನಡದಲ್ಲಿ ಸಮಗ್ರ ಇಂಗ್ಲಿಷ್ ಸಾಹಿತ್ಯ ಪರಿಚಯವನ್ನು ಮಾಡಿಕೊಡುತ್ತದೆ. ಈ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ (2001). ಇವರ ಇಲಿಯಡ್ ಕೃತಿಗೆ ದೇವರಾಜ ಬಹದ್ದೂರ್ ಪ್ರಶಸ್ತಿಯೂ ಇಂಗ್ಲಿಷ್ ಭಾಷೆಯಲ್ಲಿ ಆಧುನಿಕ ಸಾಹಿತ್ಯ ವಿಮರ್ಶೆ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ (1984) ಲಭಿಸಿವೆ. ಇವರಿಗೆ ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ವಜ್ರಮಹೋತ್ಸವ ಪ್ರಶಸ್ತಿ, ವರ್ಧಮಾನ ಸಾಹಿತ್ಯ ಪ್ರಶಸ್ತಿ (1992), ಕೆಂಪೇಗೌಡ ಪ್ರಶಸ್ತಿ, ವಿ.ಎಂ.ಇನಾಂದಾರ ವಿಮರ್ಶಾ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ, ಬಿ.ಎಂ.ಶ್ರೀ ಪ್ರಶಸ್ತಿ, ಅ.ನ.ಕೃಷ್ಣರಾಯ ಪ್ರಶಸ್ತಿ, ಮಾಸ್ತಿ ವೆಂಕಟೇಶ ಐಯ್ಯಂಗಾರ್ ಪ್ರಶಸ್ತಿ (2002) ಲಭಿಸಿವೆ. 

	ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳ ಮೇಲೆ ಸಮಾನ ಪಾಂಡಿತ್ಯ ವಿರುವ ಇವರ ವಿಮರ್ಶೆಯಲ್ಲಿ ವಸ್ತುನಿಷ್ಠ ಗುಣವಿದೆ. ಇಂಗ್ಲಿಷ್ ಭಾಷೆಯಲ್ಲಿ ಆಧುನಿಕ ಸಾಹಿತ್ಯ ವಿಮರ್ಶೆ, ಗ್ರೀಕ್ ರಂಗಭೂಮಿ ಮತ್ತು ನಾಟಕ-ಇವು ಕನ್ನಡ ಸಾಹಿತ್ಯ ವಿಮರ್ಶೆಯಲ್ಲಿ ಆಚಾರ್ಯ ಕೃತಿಗಳೆನಿಸಿವೆ. ಇವರ ಹೊಸಗನ್ನಡ ಸಾಹಿತ್ಯ 20ನೆಯ ಶತಮಾನದ ಸಾಹಿತ್ಯವನ್ನು ಸಮಗ್ರವಾಗಿ ಪರಿಚಯ ಮಾಡಿಕೊಡುವ ಏಕೈಕ ಗ್ರಂಥ. 

	ಇವರು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ (1947-50), ಬಿ.ಎಂ.ಶ್ರೀ ಸ್ಮಾರಕ ಪ್ರತಿಷ್ಠಾನದ ಅಧ್ಯಕ್ಷ, ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಥಮ ಅಧ್ಯಕ್ಷ ಮೊದಲಾದ ಸ್ಥಾನಮಾನಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಸಮಿತಿ, ಕೇಂದ್ರ ಸಾಹಿತ್ಯ ಅಕಾಡೆಮಿ, ನ್ಯಾಷನಲ್ ಬುಕ್ ಟ್ರಸ್ಟ್ ಮೊದಲಾದ ಸಮಿತಿಗಳಲ್ಲಿ ಇವರು ಸದಸ್ಯರಾಗಿ ಕೆಲಸ ಮಾಡಿದ್ದಾರೆ. 

	ಇವರು ಹಲವು ದಶಕಗಳಿಂದ ಕನ್ನಡದ ಚಳವಳಿಗಳಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳುತ್ತ ಬಂದಿದ್ದಾರೆ. ಇವರ ಮುಯ್ಯಿ ಕಥೆ ಚಲನಚಿತ್ರವಾಗಿದೆ.	
								
		(ಎಸ್.ಎಮ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ